ಜೋಳ 

	ಪ್ರಪಂಚದಲ್ಲಿ ಬಳಕೆಯಲಿರುವ ನಾಲ್ಕು ಅತಿಮುಖ್ಯ ಆಹಾರ ಧಾನ್ಯಗಳಲ್ಲಿ ಒಂದು (ಸಾರ್ಗಮ್). ಆಹಾರಪೂರೈಕೆಯಲ್ಲಿ ಗೋದಿ, ಬತ್ತಗಳ್ನು ಬಿಟ್ಟರೆ ಇದೇ ಮುಖ್ಯವಾದ್ದು. ಆಫ್ರಿಕ ಮತ್ತು ಏಷ್ಯಗಳ ಹಲವಾರು ಮಿಲಿಯನ್ ಜನಗಳ ಜೀವನಾಧಾರವೆನಿಸಿದೆ ಇದು. ಅಲ್ಲದೆ ಲಕ್ಷಾಂತರ ದನಗಳ ಮೇವು ಆಗಿಯೂ ಇದು ಉಪಯುಕ್ತವಾಗಿದೆ. ಇದು ಪೋಯೇಸೀ ಕುಟುಂಬದ ಆಂಡ್ರೋಪೋಗೋನಿಯ ಗುಂಪಿನ ಸೋರ್ಗಾಸ್ಟ್ರೀ ಉಪಗುಂಪಿಗೆ ಸೇರಿದೆ. ಜಾತಿಯ ವೈe್ಞÁನಿಕ ಹೆಸರು ಸಾರ್ಗಮ್. ಈ ಜಾತಿ ಸಂಕೀರ್ಣ ಬಗೆಯಾದಾಗಿದ್ದು ಸಾಗುವಳಿಯಲ್ಲಿರುವ ಹಾಗು ಕಾಡುಗಿಡಗಳಾಗಿ ಬೆಳೆಯುವ ಅನೇಕ ಬಗೆಗಳನ್ನು ಒಳಗೊಂಡಿದೆ. ಬಗೆಗಳ ಸಂಖ್ಯೆ ನಿಶ್ಚಿತವಾಗಿಲ್ಲ. ಸಾಗುವಳಿಯಲ್ಲಿರುವ ಜೋಳದಲ್ಲಿ 31 ಬಗೆಗಳಿವೆ. ಇವುಗಳಲ್ಲಿ ಗ್ರೈನ್ ಸಾರ್ಗಮ್ ಸೋರ್ಗಾಸ್, ಗರಾಸ್ ಸಾರ್ಗಮ್ ಮತ್ತು ಬ್ರೂಮ್‍ಕಾರ್ನ್-ಎಂಬವು ಮುಖ್ಯವಾದವು.

	ಸಸ್ಯಶಾಸ್ತ್ರೀಯ ವಿವರಣೆ : ಜೋಳ ಸುಮಾರು 2'-15' ಎತ್ತರಕ್ಕೆ ಬೆಳೆಯುತ್ತದೆ ಗಿಡದಲ್ಲಿ 7-18 ಅಥವಾ ಕೆಲವು ಸಲ ಇನ್ನೂ ಹೆಚ್ಚು ಗೆಣ್ಣುಗಳಿರುತ್ತವೆ. ಬೇರು ಸುಮಾರು 3'-4' ಆಳಕ್ಕೆ ಇಳಿದು ಸಮತಲವಾಗಿ ಹರಡುತ್ತದೆ. ಕಾಂಡದ ಬುಡದ ವ್ಯಾಸ 1' 2 1/2". ಕಾಂಡ ರಸಭರಿತವಾಗಿದೆ. ಕೆಲವು ಬಗೆಗಳಲ್ಲಿ ಕಬ್ಬಿನಂತೆ ಸಿಹಿಯಾಗಿರುವುದೂ ಉಂಟು. ಕಾಂಡದ ತುದಿಯಲ್ಲಿ ಹೂಗೊಂಚಲು ಅರಳುತ್ತದೆ. ಪೂರ್ಣ ಬೆಳೆದ ಸಸ್ಯದಲ್ಲಿ 7-28 ಎಲೆಗಳುಂಟು. ಎಲೆಯಲ್ಲಿ ಆವರಣ ಮತ್ತು ಅಲಗುಗಳೆಂಬ ಎರಡು ಭಾಗಗಳಿದ್ದು ಇವೆರಡರ ನಡುವೆ ಲಿಗ್ಯೂಲ್ ಮತ್ತು ಡ್ಯೂಲಾಪ್ ಎಂಬೆರಡು ಭಾಗಗಳಿವೆ. ಗೆಣ್ಣುಗಳ ನಡುವಣ ಅಂತರ ಒಂದೇ ಅಳತೆಯದಲ್ಲ. ಕೆಳಗಿನ ಗೆಣ್ಣುಗಳ ನಡುವಿನ ಅಂತರ ಮೇಲಣ ಗೆಣ್ಣುಗಳ ನಡುವಿನ ಅಂತರಕ್ಕಿಂತ ಕಡಿಮೆಯಾಗಿದೆ.

	ಜೋಳದ ಹೂಗೊಂಚಲು ಸಾಮಾನ್ಯವಾಗಿ 3"-20" ಉದ್ದ ಹಾಗೂ 2 1/2" — 8" ಅಗಲದ ಸಂಕೀರ್ಣ ಗೊಂಚಲು. ಇದು ವಿರಳವಾಗಿರಬಹುದು ಇಲ್ಲವೆ ಸಾಂದ್ರವಾಗಿರಬಹುದು. ಹೂಗೊಂಚಲಿನ ಅಕ್ಷದಲ್ಲಿ ಅಸ್ಪಷ್ಟವಾದ ಹೆಣ್ಣುಗಳಿವೆ. ಅಲ್ಲದೆ ಅಕ್ಷದ ಮೇಲೆ ನಾನಾರೀತಿಯ ತಗ್ಗು ಗೆರೆಗಳೂ ಉಂಟು. ಗೆಣ್ಣುಗಳು ರೋಮಮಯ. ಗೆಣ್ಣುಗಳಿಂದ ಕೆಲವು ಕವಲುಗಳು ಹುಟ್ಟುತ್ತವೆ. ಇವುಗಳಿಂದ ಉಪಕವಲುಗಳೂ ಉಪಕದಿರು ಗೊಂಚಲುಗಳೂ ಮೂಡುತ್ತವೆ. ಈ ಗೊಂಚಲುಗಳು ಸಾಮಾನ್ಯವಾಗಿ ಜೋಡಿಗಳಲ್ಲಿವೆ. ಇವುಗಳಲ್ಲಿ ಒಂದು ಮಾತ್ರ ಫಲವಂತಿಯಾಗಿದೆ. ಇನ್ನೊಂದು ಬಂಜೆ. ಉಪಕದಿರುಗಳು ಅರಳುವ ಕ್ರಮ ಹೂಗೊಂಚಲಿನ ಮೇಲ್ಭಾಗದಿಂದ ಕೆಳಭಾಗದೆಡೆಗೆ, ಅರಳುವಿಕೆ ಮಧ್ಯರಾತ್ರಿ ಅಥವಾ ಮುಂಜಾನೆಯ ವೇಳೆಗೆ ಆರಂಭವಾಗುತ್ತದೆ. ಮತ್ತು ಸಂಪೂರ್ಣವಾಗಿ ಅರಳಲು 6-9 ದಿವಸಗಳು ಹಿಡಿಯುತ್ತದೆ. ಪುಷ್ಪಪಾತ್ರೆಯಲ್ಲಿ 4 ಪುಚ್ಚಗಳಿವೆ. ಇವು ತೆರೆಯತ್ತ ಬಂದಂತೆ ಶಲಾಕಾಗ್ರ ಹಾಗೂ ಪರಾಗಕೋಶಗಳು ಹೊರಬರುತ್ತವೆ. ಹೀಗೆ ಹೊರಬರುವಾಗಲೇ ಪರಾಗವೂ ಹೊರಸೂಸುತ್ತದೆ. ಶಲಾಕಾಗ್ರಕ್ಕೆ ಹೂವುಗಳು ಅರಳುವ ಕೆಲವು ದಿನಗಳು ಮುಂಚೆಯೇ ಪರಾಗ ಸ್ವೀಕರಣ ಸಾಮಥ್ರ್ಯ ಬರುವುದು. ಅನಂತರ 8-16 ದಿನಗಳ ವರೆಗೆ ಈ ಸ್ಥಿತಿಯಲ್ಲೇ ಇರುತ್ತದೆ. ಜೋಳದಲ್ಲಿ ಸ್ವಪರಾಗಸ್ಪರ್ಶವೇ ಸಾಮಾನ್ಯ. ಕೆಲವೊಮ್ಮೆ ಅನ್ಯಪರಾಗಸ್ಪರ್ಶವೂ ನಡೆಯುವುದುಂಟು. ಜೋಳದ ಫಲ ಕ್ಯಾರಿಯಾಪ್ಸಿಸ್ ಮಾದರಿಯದು. ಇದು ಗುಂಡಾಗಿದೆ. ಬುಡ ಕೊಂಚ ಚೂಪು ಅಲ್ಲದೆ ಬುಡದ ಒಂದು ಪಾಶ್ರ್ವದಲ್ಲಿ ಸ್ವಲ್ಪ ತಗ್ಗು ಉಂಟು. ಬೀಜದ ಹೊದಿಕೆ ದಪ್ಪವಾಗಿರಬಹುದು ಇಲ್ಲವೆ ತೆಳುವಾಗಿರಬಹುದು. ಅಂತೆಯೇ ಇದು ಸ್ಫಟಿಕೀಯವಾಗಿರಬದಹುದು ಅಥವಾ ಸುಲಭವಾಗಿ ಪುಡಿಪುಡಿಯಾಗುವಂತಿರಬಹುದು.

	ಜೋಳದ ಇತಿಹಾಸ : ಇದು ವಿಶೇಷವಾಗಿ ಉಷ್ಣವಲಯದ ಬೆಳೆ. ಆಫ್ರಿಕ, ಭಾರತ, ಚೀನ, ಮಂಚೂರಿಯ ಮತ್ತು ಅಮೆರಿಕಗಳು ಜೋಳವನ್ನು ಬೆಳೆಸುವ ದೇಶಗಳಲ್ಲಿ ಮುಖ್ಯವಾದವು. ಭಾರತದಲ್ಲಿ ಆಂಧ್ರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಮಧ್ಯಪ್ರದೇಶ, ರಾಜಾಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಇದನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಇರಾನ್, ತುರ್ಕಿ, ಏಷ್ಯ ಮೈನರ್ ದಕ್ಷಿಣ ಅಮೆರಿಕ ಮತ್ತು ಈಸ್ಟ್ ಹಾಗೂ ವೆಸ್ಟ್ ಇಂಡೀಸಿನ ಕೆಲವು ದ್ವೀಪಗಳಲ್ಲೂ ಜೋಳದ ಬೇಸಾಯ ಉಂಟು. ಜೋಳದ ತವರು ಪಶ್ಚಿಮ ಆಫ್ರಿಕ ಎಂಬ ಅಭಿಪ್ರಾಯ ಉಂಟು. ಬಹುಶಃ ಅಬಿಸೀನಿಯದಲ್ಲಿ ಮೊಟ್ಟಮೊದಲು ಇದರ ಸಾಗುವಳಿ ಆರಂಭವಾಗಿರಬೇಕು. ಕ್ರಿ. ಪೂ. 1500ರ ಅನಂತರ ಭಾರತದಲ್ಲಿ ಜೋಳದ ಬೇಸಾಯ ರೂಢಿಗೆ ಬಂದಿರಬೇಕೆಂದು ಭಾವಿಸಲಾಗಿದೆ.
(ಬಿ.ವಿ.ವಿ. ; ಕೆ.ಆರ್.ಜಿ.ಎ.)

	ಬೇಸಾಯ : ಭಾರತದಲ್ಲಿ ಸುಮಾರು 18.7 ಮಿಲಿಯನ್ ಹೆಕ್ಟೇರುಗಳ ಪ್ರದೇಶದಲ್ಲಿ ಜೋಳದ ಬೇಸಾಯ ಉಂಟು. ಕರ್ನಾಟಕಕ್ಕೆ ರಾಷ್ಟ್ರದ ಜೋಳ ಬೆಳೆಯುವ ರಾಜ್ಯಗಳಲ್ಲಿ (ಮಹಾರಾಷ್ಟ್ರವನ್ನು ಬಿಟ್ಟರೆ) ಎರಡನೆಯ ಸ್ಥಾನ. ಇಲ್ಲಿ ಜೋಳ ಬೆಳೆಯುವ ಪ್ರದೇಶ ಸುಮಾರು 3.1 ಮಿ. ಹೆಕ್ಟೇರುಗಳಷ್ಟು ಇದೆ. ಇದರ ಪೈಕಿ ಸುಮಾರು 1.9 ಮಿ. ಹೆಕ್ಟೇರುಗಳ ಪ್ರದೇಶ ಹಿಂಗಾರಿನ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು ಉಳಿದ 1.2 ಮಿ. ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಮುಂಗಾರಿನ ಹಂಗಾಮಿನಲ್ಲಿ ಜೋಳ ಬೆಳೆಯುತ್ತಾರೆ. ಜೋಳದ ಉತ್ಪಾದನೆ ಸುಮಾರು 1.6 ಮಿ. ಟನ್ ಗಳಷ್ಟು ಇದ್ದು 1.0 ಮಿ. ಟನ್ ಧಾನ್ಯವನ್ನು ಹಿಂಗಾರಿನ ಹಂಗಾಮಿನಲ್ಲಿ ಉತ್ಪಾದಿಸಲಾಗುತ್ತದೆ. ಉಳಿದ 0,60 ಮಿ. ಟನ್‍ಗಳ ಉತ್ಪಾದನೆ ಮುಂಗಾರಿ ಪ್ರದೇಶದಿಂದ ಬರುತ್ತದೆ. ಕರ್ನಾಟಕದಲ್ಲಿ ಜೋಳ ಬೆಳೆಯುವ ಮುಖ್ಯವಾದ ಜಿಲ್ಲೆಗಳೆಂದರೆ-ಬಿಜಾಪುರ, ಗುಲ್ಬರ್ಗ, ರಾಯಚೂರು, ಧಾರವಾಡ, ಬೆಳಗಾವಿ. ಬಳ್ಳಾರಿ ಮತ್ತು ಚಿತ್ರದುರ್ಗ. ಈ ಜಿಲ್ಲೆಗಳ ಬಹುಭಾಗದಲ್ಲಿ ಜೋಳವನ್ನು ಹಿಂಗಾರಿನಲ್ಲಿ ಅಂದರೆ ಸೆಪ್ಟಂಬರ್ ಅಕ್ಟೋಬರ್ ತಿಂಗಳಲ್ಲಿ ಬಿತ್ತನೆಮಾಡಿ ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಕಟಾವು ಮಾಡುತ್ತಾರೆ. ಆದರೆ ಪಶ್ಚಿಮದ ನಿಶ್ಚಿತ ಮಳೆ ಬೀಳುವ ಪ್ರದೇಶಗಳಲ್ಲಿ ಅಂದರೆ ಧಾರವಾಡ, ಬಳ್ಳಾರಿ, ರಾಯಚೂರು, ಚಿತ್ರದುರ್ಗ ಮತ್ತು ಬೆಳಗಾಂವಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರಿನ ಪೂರ್ವದಿಕ್ಕಿನಲ್ಲಿ ಸ್ವಲ್ಪ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಮುಂಗಾರಿನಲ್ಲಿ ಜೋಳ ಬೆಳೆಯುತ್ತಾರೆ. ಅಂದರೆ ಜೂನ್-ಜುಲೈ ತಿಂಗಳಲ್ಲಿ ಬಿತ್ತನೆಮಾಡಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕಟಾವುಮಾಡುತ್ತಾರೆ.

	ಭಾರತದಲ್ಲಿ ಜೋಳ ಮುಖ್ಯವಾಗಿ ಖುಷ್ಕಿ ಜಮೀನಿನ ಮತ್ತು ಕಡಿಮೆ ಫಲವತ್ತಾದ ಜಮೀನಿನ ಬೆಳೆ ಆಗಿರುವುದರಿಂದ ಇದರ ಇಳುವರಿ ಹೆಕ್ಟೇರಿಗೆ ಕೇವಲ 5.2 ಕ್ವಿಂಟಾಲುಗಳಷ್ಟಿದ್ದು ಪ್ರಪಂಚದ ಬೇರೆ ಜೋಳ ಬೆಳೆಯುವ ರಾಷ್ಟ್ರಗಳ ಇಳುವರಿಗಿಂತ ಬಹಳ ಕಡಿಮೆ ಇದೆ. ಆದರೆ ಈಗಿನ ಅಧಿಕ ಇಳುವರಿ ಕೊಡವ ಶಕ್ತಿಮಾನ್ ಜೋಳದ ತಳಿಗೆ ಬಿಡುಗಡೆಯಿಂದಾಗಿ ಜೋಳದ ಉತ್ಪಾದನೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದು ಜೋಳ ಇತ್ತೀಚೆಗೆ ಒಂದು ಮುಖ್ಯ ಆರ್ಥಿಕ ಬೆಳೆಯಾಗಿದೆ. ಆದರೂ ಶಕ್ತಿಮಾನ್ ಜೋಳದ ತಳಿಗಳು ಕ್ರಿಮಿಕೀಟಗಳ ಹಾವಳಿಗೆ ತುತ್ತಾಗುವುದರಿಂದಲೂ ಮತ್ತು ಹಿಂಗಾರಿ ಹಂಗಾಮಿನಲ್ಲಿ ಬೆಳೆಸಲು ಅಷ್ಟೊಂದು ಯೋಗ್ಯವಾಗಿಲ್ಲದಿರುವುದರಿಂದಲೂ ಇವುಗಳನ್ನು ಬೆಳೆಯುವ ಪ್ರದೇಶದಲ್ಲಿ ಅಷ್ಟೊಂದು ಹೆಚ್ಚಳವಾಗಿಲ್ಲ. ಆದರೆ ಈಗ ಕಳೆದ ಕೆಲವಾರು ವರ್ಷಗಳಿಂದ ಈ ದಿಶೆಯಲ್ಲಿ ಸಾಕಷ್ಟು ಸಂಶೋಧನೆಯ ನಡೆದಿದ್ದು ಹಿಂಗಾರಿ ಹಂಗಾಮಿಗೆ ಅನುಕೂಲವಾಗುವ ಕ್ರಿಮಿಕೀಟಗಳ ಹಾವಳಿಯನ್ನು ತಡೆಗಟ್ಟುವ ಮತ್ತು ಉತ್ತಮ ಕಾಳಿನ ಗುಣ ಲಕ್ಷಣಗಳಿರುವ ಹಿಂಗಾರಿ ಜೋಳದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

	ಮುಂಗಾರಿ ಜೋಳವನ್ನು ಎಲ್ಲ ತರಹದ ಮಣ್ಣಿನ ಪ್ರದೇಶಗಳಲ್ಲಿ ಅಂದರೆ ಉಸುಕು, ಕೆಂಪು ಮತ್ತು ಕಪ್ಪು ಮಣ್ಣಿನ ಪ್ರದೇಶಗಳಲ್ಲಿ ಬೆಳೆಸಬಹುದು. ಆದರೆ ಹಿಂಗಾರಿ ಜೋಳವನ್ನು ಕಪ್ಪು ಮಣ್ಣಿನ ಪ್ರದೇಶದಲ್ಲಿ ಮಾತ್ರ ಬೆಳೆಸಬಹುದು. ಮುಂಗಾರಿ ಹಂಗಾಮಿನ ಪ್ರದೇಶದ ಬಹುಭಾಗದಲ್ಲಿ ಜೋಳವನ್ನು ಜೂನ್-ಜುಲೈ ತಿಂಗಳುಗಳಲ್ಲಿ ಬಿತ್ತನೆ ಮಾಡಲಾಗುತ್ತದ. ಆದರೂ ಮೈಸೂರು ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂಗಾರಿ ಜೋಳವನ್ನು ಬೇಗನೆ ಬಂದರೆ ಏಪ್ರಿಲ್-ಮೇ ತಿಂಗಳುಗಳಲ್ಲಿ ಬಿತ್ತುವ ಪದ್ಧತಿ ಇದೆ. ಜೋಳದ ಬಿತ್ತನೆಮಾಡಲು ಸರಿಯಾದ ಕಾಲವನ್ನು ಕಂಡುಹಿಡಿಯಲು ನಡೆಸಿದ ಸಂಶೋಧನೆಯಿಂದಾಗಿ ಜೂನ್ ತಿಂಗಳಲ್ಲಿ ಬಿತ್ತನೆ ಮಾಡುವುದು ಲಾಭದಾಯಕವೆಂದು ಕಂಡುಬಂದಿದೆ (ಪಟ್ಟಿ 1).
ಪಟ್ಟಿ 1 : ಬಿತ್ತನೆಯ ಕಾಲ ಮತ್ತು ಜೋಳದ ಇಳುವರಿ (ಕ್ವಿಂ. / ಹೆ.)
							ಬಿತ್ತನೆಯ ಕಾಲ
    (
	ತಳಿ		ಜೂನ್-25 	ಜುಲೈ-1 ಜುಲೈ-8 ಜುಲೈ-15 ಜುಲೈ-22 ಸರಾಸರಿ
ಸಿ.ಎಸ್.ಎಚ್-1		….. 41.4	46.8	43.0	32.9	21.3.	37.1
ಸಿ.ಎಸ್.ಎಚ್-3		…..47.3		44.2	39.2	27.9	20.9	35.9
ಸ್ವರ್ಣ			….40.6		35.9	30.1	23.1	11.3	28.2
ಸರಾಸರಿ			…..43.1		42.3	37.4	28.0	17.8	-----
ವರ್ಗ			…..(102)	(100)	(88)	(66)	(42)	-----

	ಮೇಲ್ಕಾಣಿಸಿದ ಪಟ್ಟಿಯಿಂದ ಜೋಳದ ಬಿತ್ತನೆಯನ್ನು ಜುಲೈ ತಿಂಗಳ ಮೊದಲನೆಯ ವಾರಕ್ಕಿಂತ ತಡವಾಗಿ ಮಾಡಬಾರದು ಎಂದು ಗೊತ್ತಾಗುತ್ತದೆ. 

	ತಳಿಗಳು : ಮುಂಗಾರಿ ಜೋಳದಲ್ಲಿ ಅನೇಕ ಸ್ಥಳೀಯ ತಳಿಗಳನ್ನು ಆಯಾ ಪ್ರದೇಶಗಳಲ್ಲಿ ಬೆಳೆಸಲಾಗುತ್ತಿದೆ. ಕರಾಡ, ತಲಗೊಂಡ, ಬಿ.ಎಚ್. 4-1-4, ಗಿಡ್ಡ ಮಾಲದಂಡಿ ತಳಿಗಳನ್ನು ಬೆಳಗಾಂವಿ ಜಿಲ್ಲೆಯಲ್ಲಿಯೂ ನಂದ್ಯಾಲ, ಸದಗರ ನಂದ್ಯಾಲ, ಪುಲ್ಗರ್, ಡಿ-340 ಮುಂತಾದ ತಳಿಗಳನ್ನು ಧಾರವಾಡ, ರಾಯಚೂರು ಜಿಲ್ಲೆಗಳಲ್ಲೂ ಬೆಳೆಸಲಾಗುತ್ತದೆ.

	ಅಖಿಲಭಾರತ ಮಟ್ಟದಲ್ಲಿ ಜೋಳದ ತಳಿ ಅಭಿವೃದ್ಧಿಯೋಜನೆ ಆರಂಭವಾದ್ದು 1960ರಲ್ಲಿ. ಅಖಿಲಭಾರತ ಕೃಷಿ ಸಂಶೋಧನ ಆರೋಯ ಮತ್ತು ರಾಕ್ ಫೆಲ್ಲರ್ ಫೌಂಡೇಷನ್‍ಗಳ ಸಹಕಾರ ಕಾರ್ಯಕ್ರಮದ ಅಂಗವಾಗಿ ಪ್ರಪಂಚದ ಜೋಳ ಬೆಳೆಯುವ ಎಲ್ಲ ರಾಷ್ಟ್ರಗಳಿಂದ ವಿವಿಧ ಜೋಳದ ತಳಿಗಳನ್ನು ಶೇಖರಿಸಲಾಯಿತು. ಹೀಗೆ ಸಂಗ್ರಹಿಸಿರುವ ತಳಿಗಳ ಸಂಖ್ಯೆ ಸುಮಾರು 10,000. ಅವುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಿ ಜೋಳದ ವಿವಿಧ ಸಂಶೋಧನಾಲಯಗಳಿಗೆ ಅವುಗಳ ಬೇಡಿಕೆಯ ಪ್ರಕಾರ ಒದಗಿಸಲಾಗುತ್ತದೆ. ಅಮೆರಿಕದಲ್ಲಿ ಕಂಡುಹಿಡಿಯಲಾದ ಹೆಣ್ಣು ಜಾತಿಯ ತಳಿ ಸಿ. ಕೆ. 60ಎ ಯನ್ನು ತಂದು ಅದನ್ನು ವಿವಿಧ ಅನುವಂಶಿಕ ತಳಿಗಳೊಡನೆ ಸಂಪರ್ಕಗೊಳಿಸಿ ಅವುಗಳಲ್ಲಿ ಅತ್ಯುತ್ತಮವೆನಿಸಿದ ಸಿ. ಕೆ. 60ಎ x ಐ.ಎಸ್. 84 ಎನ್ನುವ ಶಕ್ತಿಮಾನ್ ಜೋಳದ ತಳಿಯನ್ನು 1964ರಲ್ಲಿ ಬಿಡುಗಡೆ ಮಾಡಲಾಯಿತು. ತರುವಾಯ ಸಿ. ಕೆ. 60ಎ x ಐಸ್. 3691 ಎನ್ನುವ ಎರಡನೆಯ ಶಕ್ತಿಮಾನ್ ಜೋಳದ ತಳಿಯನ್ನು (ಸಿ.ಎಸ್.ಎಚ್-2) 1965ರಲ್ಲಿ ಬಿಡುಗಡೆ ಮಾಡಲಾಯಿತು. ಈ ಎರಡು ಅಡ್ಡ ತಳಿಗಳ್ನು (ಸಿ.ಎಸ್.ಹೆಚ್-1 ಮತ್ತು ಸಿ.ಎಸ್.ಎಚ್-2) ಅಮೆರಿಕದ ಸಿ. ಕೆ. 60ಎ ಹೆಣ್ಣು ಜಾತಿಯ ತಳಿಯನ್ನು ಉಪಯೋಗಿಸಿ ಅಭಿವೃದ್ಧಿಪಡಿಸಿರುವುದರಿಂದಲೂ ಈ ಹೆಣ್ಣು ಜಾತಿಯ ತಳಿಯ ಕಾಳಿನ ಗುಣ ಅಷ್ಟು ಚೆನ್ನಾಗಿಲ್ಲದಿರುವುದರಿಂದಲೂ ಇದು ಕ್ರಿಮಿಕೀಟಗಳ ಹಾವಳಿಗೆ ಹೆಚ್ಚಾಗಿ ತುತ್ತಾಗುವುದರಿಂದಲೂ ಭಾರತದಲ್ಲಿಯೇ ಹೆಣ್ಣು ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಇದರ ಫಲವಾಗಿ ಈತ ಸುಮಾರು 12 ವಿವಿಧ ಹೆಣ್ಣು ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದ ಜೋಳದ ತಳಿಗಳಲ್ಲೂ, ಕಾಳಿನ ಗುಣವು ಬಹಳ ಉತ್ತಮವಾಗಿದೆಯಲ್ಲದೆ ಅಡ್ಡತಳಿಗಳನ್ನು ಉತ್ಪಾದಿಸುವಲ್ಲಿ ಗಂಡು ಸಸ್ಯವನ್ನಾಗಿ ಉಪಯೋಗಿಸಲು ಅವು ಒಳ್ಳೆಯ ಅರ್ಹತೆಯನ್ನು ಪಡೆದಿದೆ. ಆದರೂ ಈ ಎಲ್ಲ ತಳಿಗಳೂ ತುಂಬ ಎತ್ತರಕ್ಕೆ ಬೆಳೆಯುವುದರಿಂದ ಮತ್ತು ತೆನೆ ಬಿಡಲು ಹೆಚ್ಚು ಕಾಲಾವಧಿಯನ್ನು ತೆಗೆದುಕೊಳ್ಳುವುದರಿಂದ ಅವುಗಳನ್ನು ನೇರವಾಗಿ ಗಂಡು ಸಸ್ಯಗಳನ್ನಾಗಿ ಉಪಯೋಗಿಸಲು ಯೋಗ್ಯವಾಗಿಲ್ಲ. ಆದ್ದರಿಂದ ಈ ತಳಿಗಳನ್ನು ಪರರಾಷ್ಟ್ರಗಳ ತಳಿಗಳೊಡನೆ ಸಂಕರಮಾಡಿ ಅಥವಾ ಅನುವಿಕಿರಣಕ್ಕೆ ಗುರಿಪಡಿಸಿ ಬೇಗನೆ ತೆನೆಬಿಡುವ ಗಿಡ್ಡಜಾತಿಯ ತಳಿಗಳನ್ನಾಗಿ ಮಾರ್ಪಡಿಸಿ ಅವುಗಳನ್ನು ತಳಿಗಳ ಉತ್ಪಾದನೆಯಲ್ಲಿ ಗಂಡುಸಸ್ಯಗಳನ್ನಾಗಿ ಉಪಯೋಗಿಸಲಾಯಿತು. ಈ ರೀತಿ ತಯಾರಿಸಿದ ಹೊಸ ಶಕ್ತಿಮಾನ್ ಜೋಳದ ತಳಿಗಳಾದ ಸಿ.ಎಸ್.ಎಚ್-1. ಸಿ.ಎಸ್.ಎಚ್-2 ಸಿ.ಎಸ್.ಎಚ್.-3. ಸಿ.ಎಸ್.ಎಚ್.-4 ಎಂಬವೂ ಸವರ್ಣ ಎನ್ನುವ ಅಧಿಕ ಇಳುವರಿ ತಳಿಗಳೂ ಬಿಡುಗಡೆಯಾಗಿವೆ. ಇವುಗಳಲ್ಲಿ ಸಿ.ಎಸ್.ಎಚ್.-1 ಅತಿ ಹೆಸರುವಾಸಿಯಾದುದು. ಇದನ್ನು ವಿವಿಧ ಮಣ್ಣಿನ ಜಮೀನುಗಳಲ್ಲಿ, ವಿವಿಧ ವಾತಾವರಣಗಳಲ್ಲಿ ಮತ್ತು ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಬೆಳೆಯಬಹುದು. ಆದರೆ ಸಿ.ಎಸ್.ಎಚ್.-2 ಮತ್ತು ಸಿ.ಎಸ್.ಎಚ್.-3 ತಳಿಗಳು ನಿಶ್ಚಿತಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಸಲು ಅನುಕೂಲವಾಗಿವೆ. ಇವಲ್ಲದೆ 2219  x ಸಿ.ಎಸ್. 35-41ಎನ್ನುವ ತಳಿಯನ್ನು ಕರ್ನಾಟಕದಲ್ಲಿ ಅಭಿವೃದ್ಧಿಗೊಳಿಸಿ 2219 x 14-15-17-12 ಎನ್ನುವ ಶಕ್ತಿ ಮಾನ್ ತಳಿಯನ್ನೂ 1972ರಲ್ಲಿ ಬೇಸಾಯಕ್ಕೆ ಬಿಡುಗಡೆ ಮಾಡಲಾಯಿತು. ಮೇಲ್ಕಾಣಿಸಿದ ಎಲ್ಲ ತಳಿಗಳು ಮುಂಗಾರು ಕಾಲದಲ್ಲಿ ಮತ್ತು ಬೇಸಗೆಯಲ್ಲಿ ನೀರಾವರಿಯ ಆಶ್ರಯದಲ್ಲಿ ಬೆಳೆಸಲು ಯೋಗ್ಯವಾಗಿವೆ. ಸೂಕ್ತವಾದ ಸಸ್ಯಸಂರಕ್ಷಣೆ ಕ್ರಮಗಳನ್ನು ಕೈಗೊಂಡರೆ ಇವನ್ನು ಹಿಂಗಾಲದಲ್ಲಿ ಕೂಡ ಬೆಳೆಸಬಹುದು. ಈ ಹೊಸ ತಳಿಗಳು ಅಖಿಲಭಾರತ ಮಟ್ಟದಲ್ಲಿ ಚೆನ್ನಾಗಿ ಇಳುವರಿ ಕೊಟ್ಟಿರುವುದು ಕಂಡುಬಂದಿದೆ (ನೋಡಿ-ಪಟ್ಟಿ 2).

ಪಟ್ಟಿ 2 : ಹೊಸ ಶಕ್ತಿಮಾನ್ ತಳಿಗಳ ಇಳುವರಿಗಳು.
	ತಳಿ			ಇಳುವರಿ (ಕೆ.ಜಿ./ಹೆ.)
2219 x 14-5-17-12		3,447
2219 x ಸಿ.ಎಸ್. 3541	3,290
ಸಿ.ಎಸ್.ಎಚ್.-4			3,151
ಸಿ.ಎಸ್.ಎಚ್.-3			2,949
ಸಿ.ಎಸ್.ಎಚ್.-1			2,676
ಸಿ.ಎಸ್.ಎಚ್-2			2,648

	ಹೊಸ ಶಕ್ತಿಮಾನ್ ತಳಿಗಳು ಕಾಳಿನ ಇಳುವರಿಯಲ್ಲಿ ಮಾತ್ರವಲ್ಲದೆ ಕಾಳಿನ ಗುಣಮಟ್ಟದಲ್ಲಿ ಮತ್ತು ಕ್ರಿಮಿಕೀಟಗಳ ಹಾವಳಿಯನ್ನು ನಿರೋಧಿಸುವಲ್ಲಿ ಪರಿಣಾಮಕಾರಿಯಾಗಿವೆ.

	ಜೋಳದ ಬೆಳೆಯನ್ನು 45 ಛಿm ಅಂತರದಲ್ಲಿ ಸಾಲುಗಳನ್ನು ಮಾಡಿ, ಸಾಲುಗಳಲ್ಲಿ 15 ಛಿm. ಅಂತರದಲ್ಲಿ ಬೀಜಗಳನ್ನು ನೆಡುತ್ತಾರೆ. ಪ್ರತಿ ಹೆಕ್ಟೇರಿಗೆ 4 ಞg ಬೀಜವನ್ನು ಉಪಯೋಗಿಸುತ್ತಾರೆ. ಆದರೆ ಪೈರು ಕ್ರಿಮಿ ಕೀಟಗಳ ಹಾವಳಿಗೆ ತುತ್ತಾಗಿ ಸ್ವಲ್ಪ ಸಸಿಗಳು ಕಡಿಮೆಯಾದರೂ ಪ್ರತಿ ಹೆಕ್ಟೇರಿಗೆ ಸಸಿಗಳ ಸಂಖ್ಯೆ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಲು ಕೆಲವು ಸಲ ಹೆಕ್ಟೇರಿಗೆ ಹೆಚ್ಚು ಮೊತ್ತದಲ್ಲಿ ಬಿತ್ತನೆ ಮಾಡುವುದುಂಟು. ಪ್ರತಿ ಹೆಕ್ಟೇರಿಗೆ ಸುಮಾರು 92,000 ಸಸಿಗಳನ್ನು ಬೆಳೆಸುವುದು ವಾಡಿಕೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಪ್ರತಿ ಹೆಕ್ಟೇರಿಗೆ ಸಸಿಗಳ ಸಂಖ್ಯೆನ್ನು ಹೆಚ್ಚಿಸಿ ಅಧಿಕ ಇಳುವರಿಯನ್ನು ಪಡಯಬಹುದೆಂದು ಕಂಡುಬಂದಿದೆ. ಪ್ರತಿ ಹೆಕ್ಟೇರಿನಲ್ಲಿ 1.5 ಲಕ್ಷ ಅಥವಾ 2.5 ಲಕ್ಷ ಸಸಿಗಳ ವರೆಗೂ ಬೆಳೆಸಬಹುದು. ನಿರ್ದಿಷ್ಟ ಸಸಿಗಳ ಪ್ರಮಾಣವನ್ನು ನಿರ್ಧರಿಸುವ ಒಂದು ಸಂಶೋಧನೆಯ ಪ್ರಕಾರ ಪ್ರತಿ ಹೆಕ್ಟೇರಿಗೆ ಸಿ.ಎಸ್.ಎಚ್-1 ತಳಿಗೆ 1,80,000. ಸ್ವರ್ಣ ತಳಿಗೆ 2,70,000 ಮತ್ತು ಸ್ಥಳೀಯ ತಳಿಗಳಿಗೆ 70,000 ಸಸಿಗಳು-ಈ ಪ್ರಮಾಣದಲ್ಲಿ ಸಸಿಗಳ ಸಂಖ್ಯೆಯನ್ನು ಅಳವಡಿಸುವುದರಿಂದ ಇಳುವರಿ ಅಧಿಕಗೊಳ್ಳುತ್ತದೆ. ಸ್ವರ್ಣತಳಿಗೆ ಅತಿ ಹೆಚ್ಚಿನ ಸಸಿಗಳ ಒತ್ತಡವನ್ನು ಇಳುವರಿ ಕಡಿಮೆಯಾಗದಂತೆ ಸೈರಿಸುವ ಶಕ್ತಿ ಇದೆ. ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಇದಕ್ಕೆ ಕಾರಣವೆಂದರೆ ಇದರ ಎಲೆಗಳು ಕಾಂಡದಿಂದ ಸುಮಾರು 450 ಕೋನದಲ್ಲಿ ಬೆಳೆಯುವುದು. ಭೂಮಿಯನ್ನು ಹದಗೊಳಿಸುವಾಗ ಸುಮಾರು 5-10 ಗಾಡಿ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ (ಕಾಂಪೋಸ್ಟ್) ಕೊಡಬೇಕು. ಪ್ರತಿ ಹೆಕ್ಟೇರಿಗೆ ರಾಸಾಯನಿಕ ಗೊಬ್ಬರಗಳಾದ ನೈಟ್ರೊಜನ್, ಫಾಸ್ಪರಸ್ ಮತ್ತು ಪೊಟ್ಯಾಷ್‍ಗಳನ್ನು 100:60:40 ಞg. ಪ್ರಮಾಣದಲ್ಲಿ ಹಾಕಲು ಶಿಫಾರಸು ಮಾಡಲಾಗಿದೆ. ನೀರಾವರಿ ಸೌಕರ್ಯವಿರುವ ಕಡೆ ಅಥವಾ ಮಳೆ ಬೀಳುವ ಪ್ರದೇಶಗಳಲ್ಲಿ ಈ ಪ್ರಮಾಣ ಸೂಕ್ತವಾದ್ದು. ಆದರೆ ಮಳೆ ಕಡಿಮೆ ಬೀಳುವ ಖುಷ್ಕಿ ಪ್ರದೇಶಗಳಲ್ಲಿ ಇದನ್ನು 80:40: 30 ಞg ಪ್ರಮಾಣದಲ್ಲಿ ಕೊಡಬಹುದು. ನೈಟ್ರೋಜನ್ನನ್ನು ಎರಡು ಸಮಭಾಗಗಳಾಗಿ ಮಾಡಿ, ಒಂದು ಭಾಗವನ್ನು ಬಿತ್ತುವಾಗ ಮತ್ತು ಉಳಿದ ಭಾಗವನ್ನು ಬೆಳೆ ಸುಮಾರು ಒಂದು ತಿಂಗಳದ್ದಾಗಿರುವಾಗ ಮೇಲ್ಗೊಬ್ಬರವಾಗಿ ಕೊಡಬಹುದು. ಆದರೆ ಫಾಸ್ಪರಸ್ ಮತ್ತು ಪೂಟ್ಯಾಷ್‍ಗಳನ್ನು ನೈಟ್ರೊಜನ್ ಜೊತೆಯಲ್ಲಿ ಬೀಜ ಬಿತ್ತುವಾಗಲೇ ಹಾಕಬೇಕು.

	ಶಕ್ತಿಮಾನ್ ತಳಿಗಳಿಗೆ ಕಿಮಿಕೀಟಗಳ ಹಾವಳಿ ಹೆಚ್ಚು ಇರುವುದರಿಂದ ಇಳುವರಿಯನ್ನು ಹೆಚ್ಚಿಸಲು ಸಮಯಕ್ಕೆ ಸರಿಯಾಗಿ ಸಸ್ಯ ಸಂರಕ್ಷಣೆಯ ಕ್ರಮಗಳನ್ನು ಅನುಸರಿಸಬೇಕು. ಇದಕ್ಕೆ ಬರುವ ಸುಳಿಬೀಳಿಸುವ ನೊಣದ (ಶೂಟ್ ಫ್ಲೈ) ಹಾವಳಿಯನ್ನು ತಡೆಗಟ್ಟಲು ತಿಮೆಟ್ ಅಥವಾ ಫ್ಲೋರೇಟನ್ನು ಹೆಕ್ಟೇರಿಗೆ 7 ಞg ಯಂತೆ ಬಿತ್ತುವಾಗ ರಾಸಾಯನಿಕ ಗೊಬ್ಬರಗಳ ಜೊತೆ ಮಿಶ್ರಮಾಡಿ ಸಾಲುಗಳಲ್ಲಿ ಹಾಕಬೇಕು. ಅಥವಾ 3% ಕಾರ್ಬೊಪ್ಯೂರಾನ್ ಅಥವಾ ಫ್ಯೂರಡಾನನ್ನು ಬೀಜಗಳಿಗೆ ಲೇಪಿಸಬೇಕು ಅಥವಾ ಭೂಮಿಯಲ್ಲಿ 3% ಪುಡಿಯನ್ನು ಒಂದು ಮೀಟರ್ ಸಾಲಿಗೆ 3 g. ನಂತೆ ಹಾಕಬೇಕು. ಕಾರ್ಬೊಫ್ಯೂರಾನ್ ಸುಳಿ ಬೀಸುವ ನೊಣದ ಹಾವಳಿಯನ್ನು ನಿಯಂತ್ರಿಸಲು ಬಹಳ ಪರಿಣಾಮಕಾರಿಯಾಗಿದೆ. ಎಂಡ್ರಿನ್ ದ್ರಾವಣಗಳನ್ನು 15 ದಿವಸಕ್ಕೊಮ್ಮೆ ಸಿಂಪಡಿಸುವುದರಿಂದ ಕಾಂಡ ಕೊರೆಯುವ ಹುಳದ ಹಾವಳಿಯನ್ನು ತಡೆಗಟ್ಟಬಹುದು. ಜೋಳಕ್ಕೆ ಬರುವ ಜೋನಿರೋಗ ಮತ್ತು ತೆನೆಗಳಿಗೆ ಬರುವ ಮಿಡ್ಜ್ ಹುಳುಗಳನ್ನು ನಿಯಂತ್ರಿಸಲು 0.2% ಜೈರಾಮ್ ಅಥವಾ ಥೈರಾಮ್‍ನ್ನು 3 ಞg. ಕಾರ್ಬರೈಲ್ ಜೊತೆಯಲ್ಲಿ ಮಿಶ್ರಮಾಡಿ ತೆನೆಬಿಡುವುದಕ್ಕಿಂತ ಮುಂಚೆ ಸಿಂಪಡಿಸಬೇಕು. ಅಟ್ರಜೀನನ್ನು ಹೆಕ್ಟೇರಿಗೆ 0.5 ಞgಯಂತೆ ಬಿತ್ತುವ ಮುನ್ನ ಜಮೀನಿಗೆ ಸಿಂಪಡಿಸಿದರೆ ಕಳೆಗಳನ್ನು ತಡೆಗಟ್ಟಬಹುದು. ಆದರೆ ಕಳೆ ನಾಶಕಗಳ ಉಪಯೋಗದ ಜೊತೆಗೆ ಒಂದು ಸಾರಿ ಕೈಯಿಂದ ಕಳೆ ತೆಗೆಸುವುದು ಅಥವಾ ಮಧ್ಯ ಬೇಸಾಯ ಮಾಡುವುದು ಒಳ್ಳೆಯದು.

	ಜೋಳ ತೆನೆ ಬಿಡಲು ಸುಮಾರು (ಸಿ.ಎಸ್.ಎಚ್-1ರಲ್ಲಿ 50-60 ದಿವಸ, ಸಿ.ಎಸ್.ಎಚ್-2 ಮತ್ತು ಸಿ.ಎಸ್.ಎಚ್-3 ತಳಿಗಳಲ್ಲಿ 65-70 ದಿವಸ) 50-70 ದಿವಸಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ. ಮತ್ತು ಬೆಳೆ (ಸಿ.ಎಸ್.ಎಚ್.-1 ತಳಿಯಲ್ಲಿ 105-110 ದಿವಸಗಳು. ಸಿ.ಎಸ್.ಎಚ್.-2 ಮತ್ತು 3 ತಳಿಗಳಲ್ಲಿ 120-125 ದಿವಸಗಳೂ ಮತ್ತು ಸ್ಥಳೀಯ ತಳಿಗಳ್ಲಿ 150-180 ದಿವಸಗಳಲ್ಲಿ) 100-180 ದಿವಸಗಳಲ್ಲಿ ಕಟಾವಿಗೆ ಬರುತ್ತದೆ. ಶಕ್ತಿಮಾನ್ ತಳಿಗಳು ಹೆಕ್ಟೇರಿಗೆ ಸುಮಾರು 25 ರಿಂದ 35 ಕ್ವಿಂಟಾಲುಗಳ ವರೆಗೂ ಇಳುವರಿ ಕೊಡುತ್ತವೆ. ಆದರೆ ಸ್ಥಳೀಯ ತಳಿಗೆ ಇಳುವರಿ ಸುಮಾರು 12-15 ಕ್ವಿಂಟಾಲ್ ಮಾತ್ರ, ಅಡ್ಡತಳಿಗಳು ಸೆಪ್ಟಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಕಟಾವಿಗೆ ಬರುವುವು. ಆ ಸಮಯದಲ್ಲಿ ಮಳೆ ಸದಾ ಬರುತ್ತಿರುವುದರಿಂದಲೂ ವಾತಾವರಣದಲ್ಲಿ ತೇವಾಂಶವು ಹೆಚ್ಚಿಗೆ ಇರುವುದರಿಂದಲೂ ಫಸಲನ್ನು ಚೆನ್ನಾಗಿ ಒಣಗಿಸುವುದಕ್ಕೆ ಮತ್ತು ಚೆನ್ನಾಗಿ ಶೇಖರಿಸಿಡುವುದಕ್ಕೆ ಅನುಕೂಲತೆಗಳನ್ನು ಮಾಡಿಕೊಳ್ಳಬೇಕು. ಸ್ಥಳೀಯ ತಳಿಗಳು ಹೆಚ್ಚು ಕಾಲಾವಧಿ ತೆಗೆದುಕೊಳ್ಳುವುದರಿಂದ, ಇದಕ್ಕೆ ಜೋನಿರೋಗ ಮತ್ತು ವಿಡ್ಜ್ ಕೀಟದ ಹಾವಳಿ ಇರುವುದರಿಂದ ಬೇಗನೆ ಮಾಗುವ ಶಕ್ತಿಮಾನ್ ತಳಿಗಳನ್ನು ಬೆಳೆಸುವುದು ಲಾಭದಾಯಕ. ಶಕ್ತಿಮಾನ್ ತಳಿಗಳು ಕಟಾವಿಗೆ ಬರಲು ಸುಮಾರು 100-120 ದಿವಸಗಳ ಕಾಲಾವಧಿಯನ್ನು ತೆಗೆದುಕೊಳ್ಳುವುದರಿಂದ ಬರಿಯ ಮಳೆಯನ್ನೇ ಅವಲಂಬಿಸಿರುವ ಕೆಲವು ಸ್ಥಳಗಳಲ್ಲಿ ಕೂಡ ಎರಡು ಬೆಳೆ ಪಡೆಯುವ ಅವಕಾಶವಿದೆ. ಬೇಗನೆ ಮಾಗುವ ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ಅಲಸಂದೆಗಳನ್ನು ಜೋಳದ ಬೆಳೆಯ ಬಿತ್ತನೆಯ ಮುಂಚೆ ಬೆಳೆಯಬಹುದು ಅಥವಾ ಗೋದಿ, ಅಗಸೆ, ಕುಸುಮೆ, ಕಡಲೆ ಇವುಗಳನ್ನು ಜೋಳದ ಬೆಳೆಯ ಅನಂತರ ಬೆಳೆಸಬಹುದು. ಅಲ್ಲದೆ ಶಕ್ತಿಮಾನ್ ಜೋಳದ ಜೊತೆಗೆ ನೆಲಗಡಲೆ, ಹತ್ತಿ ಮುಂತಾದ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಅತಿಲಾಭದಾಯಕವಾಗಿ ಬೆಳೆಸಬಹುದಾಗಿದೆ.

	ಹಿಂಗಾರಿ ಜೋಳ : ಹಿಂಗಾರಿ ಜೋಳ ಅತಿ ಬಿಳುಪಾದ ಮತ್ತು ಮುತ್ತಿನಂತೆ ಹೊಳೆಯುವ ಕಾಳುಗಳುಳ್ಳದ್ದು, ಇದರಿಂದ ಮಾಡಿದ ರೊಟ್ಟಿ ಅತ ಬಿಳುಪಾಗಿಯೂ, ಮಿದುವಾಗಿಯೂ ಮತ್ತು ರುಚಿಕರವಾಗಿಯೂ ಇರುತ್ತದೆ. ಇದರಿಂದಾಗಿ ಇದು ಜನಪ್ರಿಯವಾಗಿದೆ. ಹಿಂಗಾರಿ ಜೋಳವನ್ನು ಅತಿ ಶುಷ್ಕ ಜಮೀನಿನಲ್ಲಿ, ಅತಿ ಕಪ್ಪು ಮಣ್ಣಿನ ಪ್ರದೇಶದಲ್ಲಿ ಬೆಳೆಸಲಾಗುತ್ತದೆ. ಹಿಂಗಾರಿ ಜೋಳದ ಬೆಳೆಯಲ್ಲಿ ಸಾಕಷ್ಟು ತಳಿ ಅಭಿವೃದ್ಧಿ ಕಾರ್ಯ ನಡೆದಿದ್ದು ಈಗಾಗಲೇ ರೈತರ ಬಳಕೆಗಾಗಿ ಅನೇಕ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳಲ್ಲಿ ಮುಖ್ಯವಾದವು : 1 ಮಾಲದಂಡಿ 35-1 (ಒ 35-1): ಭಾರತದ ಹಿಂಗಾರಿ ಜೋಳ ಬೆಳೆಯುವ ಎಲ್ಲ ರಾಜ್ಯಗಳಲ್ಲೂ ಇದರ ಬೇಸಾಯ ಉಂಟು. ಇದರ ಎತ್ತರ ಸುಮಾರು 8'-10'. ಕಟಾವಿಗೆ ಬರಲು ಸುಮಾರು 140-150 ದಿವಸ ಬೇಕು. ಈಗ ಬೇಸಾಯದಲ್ಲಿರುವ ಜೋಳದ ಎಲ್ಲ ತಳಿಗಳಿಗಿಂತ ಇದು ಹೆಚ್ಚಿನ ಶುಷ್ಕತೆಯನ್ನು ನಿರೋಧಿಸುವ ಶಕ್ತಿ ಉಳ್ಳದ್ದಾಗಿದೆ. ಆದ್ದರಿಂದ ಪ್ರಪಂಚದ ಅನೇಕ ಜೋಳದ ತಳಿ ಅಭಿವೃದ್ಧಿ ಸಂಶೋಧನಾಲಯಗಳಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಅಡ್ಡತಳಿಗಳಿಗೆ ತಗಲುವ ಕಾಂಡಕೊರೆಯುವ ಹುಳ ಮತ್ತು ಸುಳಿಬೀಳಿಸುವ ಹುಳಗಳ ಹಾವಳಿಯನ್ನು ನಿರೋಧಿಸುವ ಶಕ್ತಿ ಈ ತಳಿಗೆ ಇದೆ. ಆದ್ದರಿಂದ ಇದು ಹಿಂಗಾರಿ ಜೋಳದ ತಳಿಗಳಲ್ಲೆಲ್ಲ ಅತಿ ಉತ್ಕøಷ್ಟವಾದ ತಳಿ ಎಂದು ಹೇಳಬಹುದು. ಕರ್ನಾಟಕದಲ್ಲಿ ಹಿಂಗಾರಿ ಪ್ರದೇಶಗಳಲ್ಲಿ ಅಂದರೆ ಬಿಜಾಪುರ, ರಾಯಚೂರು, ಗುಲ್ಬರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇದರ ಬೇಸಾಯ ಹೆಚ್ಚು. ಮಾಲದಂಡಿ 31-2 (ಒ 31-2) ಮತ್ತು ಮಾಲದಂಡಿ 75-2 (ಒ 75-2) ಎಂಬ ಇನ್ನೆರಡು ಬಗೆಗೆಳು ಮಾಲದಂಡಿ 35-1ರ ಜಾತಿಗೆ ಸೇರಿದುವು. ಇವುಗಳಲ್ಲಿ ಒ 75-2 ಚೌಳುಭೂಮಿಯಲ್ಲಿ ಬೆಳೆಸಲು ಉತ್ತಮ ತಳಿಯಾಗಿದೆ.

	2 ಮೂಗುತಿ (5-4-1) ಜೋಳ : ಈ ತಳಿಯನ್ನು ಬಿಜಾಪುರ ಕೇಂದ್ರದಿಂದ 1969ನೆಯ ಸಾಲಿನಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ಒ 35-1 ಮತ್ತು ಗುಜರಾತಿನ ವಿರಮಗಾಂವ್ ತಳಿಗಳ ಸಂಕರದಿಂದ ಅಭಿವೃದ್ಧಿಪಡಿಸಲಾಗಿದೆ. ಇದು ಮಾಲದಂಡಿ ಜೋಳದಷ್ಟೇ ಎತ್ತರಕ್ಕೆ ಬೆಳೆಯುತ್ತದೆ ಮತ್ತು ಕಟಾವಿಗೆ ಬರಲು ಅದರಷ್ಟೇ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ. ಇದರ ಕಾಳು ಮಲದಂಡಿ ಜೋಳಕ್ಕಿಂತ ಉತ್ಕøಷ್ಟವಾಗಿದ್ದು ಇದರಿಂದ ತಯಾರಿಸಿದ ರೊಟ್ಟಿ ಹೆಚ್ಚು ಮಿದುವಾಗಿರುತ್ತದೆ. ಇದಲ್ಲದೆ ಇದರ ಕಾಂಡದಲ್ಲಿ ಪ್ರೋಟೀನ್ ಮತ್ತು ಲವಣಗಳ ಅಂಶವು ಹೆಚ್ಚಿಗೆ ಇದ್ದು, ನಾರಿನ ಅಂಶವು ಕಡಿಮೆ ಇರುವುದರಿಂದ ಇದರ ಮೇವು ದನಗಳಿಗೆ ಬಹಳ ಒಳ್ಳೆಯದು. ಮೂಗುತಿಜೋಳ ಶುಷ್ಕತೆಯನ್ನು ನಿರೋಧಿಸುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದೆ.

	3. ಅಣ್ಣಿಗೇರಿ ಜೋಳ (7-47-3) : ಇದನ್ನು ಮಾಲದಂಡಿ 35-1 ಮತ್ತು ಎಣ್ಣೆಗಾರ ಸೆಲೆಕ್ಷನ್-ಜಿ.ಎಸ್. 560-1-1 ತಳಿಗಳ ಸಂಕರಣದಿಂದ ಅಭಿವೃದ್ದಿ ಪಡಿಸಲಾಗಿದೆ. ಸ್ವಲ್ಪ ಹೆಚ್ಚು ಮಳೆ ಬೀಳುವ ಹಿಂಗಾರಿ ಪ್ರದೇಶಗಳಲ್ಲಿ ಇದನ್ನು ಬೆಳೆಸಬಹುದು. ಇದು ಮಣ್ಣಿನಲ್ಲಿ ತೇವಾಂಶ ಚೆನ್ನಾಗಿರುವ ಕಡೆ ಎಕರೆಗೆ 10-12 ಕ್ವಿಂಟಾಲುಗಳ ವರೆಗೂ ಇಳುವರಿ ಕೊಡುತ್ತದೆ.

	ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ, ಹಿಂಗಾರಿ ಜೋಳದಲ್ಲಿ ಶಕ್ತಿಮಾನ್ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಿದ್ದು ಈಗ ಎರಡು ಶಕ್ತಿಮಾನ್ ಜೋಳದ ತಳಿಗಳನ್ನು ಅಭಿವೃಸದ್ಧಿಪಡಿಸಲಾಗಿದೆ. 2219 x 5-4-1-9 ಎಂಬ ತಳಿ ಮಾಲದಂಡಿ ತಳಿಗಿಂತ 100% ರಷ್ಟು ಹೆಚ್ಚು ಇಳುವರಿ ಕೊಡುವುದಲ್ಲದೆ ಅದಕ್ಕಿಂತ ಸುಮಾರು 20-25 ದಿವಸ ಮುಂಚಿತವಾಗಿ ಕಟಾವಿಗೆ ಬರುತ್ತದೆ. ಆರ್.ಎಸ್.ಎಚ್-1 ಎನ್ನುವ ಮತ್ತೊಂದು ಶಕ್ತಿಮಾನ್ ತಳಿಯನ್ನು ಸ್ಥಳೀಯ ಹೆಣ್ಣು ಮತ್ತು ಗಂಡುಜಾತಿಗಳ ಸಂಕರದಿಂದ ವೃದ್ಧಿಸಲಾಗಿದೆ. ಇದು ಮಾಲದಂಡೆ ತಳಿಗಿಂತ 40%-50% ಹೆಚ್ಚು ಇಳುವರಿ ಕೊಡುವುದಲ್ಲದೆ ಇದರ ಕಾಳುಗಳು ಬಹಳ ಉತ್ಕøಷ್ಟವಾಗಿವೆ.

	ಹಿಂಗಾರಿ ಜೋಳದ ಕೃಷಿಪದ್ದತಿಯಲ್ಲಿ ಅನುಸರಿಸಬೇಕಾದ ಕೆಲವು ಮುಖ್ಯಾಂಶಗಳೆಂದರೆ ಇದನ್ನು ಆದಷ್ಟು ಬೇಗನೇ ಅಂದರೆ ಸೆಪ್ಟಂಬರ್ ಉತ್ತರಾರ್ಧದಲ್ಲಿ ಅಥವಾ ಅಕ್ಟೋಬರ್ ತಿಂಗಳ ಮೊದಲನೆಯ ವಾರದಲ್ಲಿ ಬಿತ್ತಬೇಕು. ರಾಸಾಯನಿಕ ಗೊಬ್ಬರಗಳನ್ನು ಹೆಕ್ಟೇರಿಗೆ 40-30-15 ಞರ. ಪ್ರಮಾಣದಲ್ಲಿ ಕೊಡಬೇಕು. ಬೆಳೆ ಸುಮಾರು 25-30 ದಿವಸಗಳದ್ದಿರುವಾಗ ಮಣ್ಣಿನಲ್ಲಿ ತೇವಾಂಶ ಚೆನ್ನಾಗಿದ್ದರೆ ನೈಟ್ರೊಜನ್ನನ್ನು ಮೇಲ್ಗೊಬ್ಬರವನ್ನಾಗಿ ಕೊಡಬಹುದು.
(ಜೆ.ವಿ.ಜಿ.)

	ರೋಗಗಳು ಮತ್ತು ಕೀಟಗಳು : ಜೋಳ ಅನೇಕ ಶೀಲಿಂಧ್ರ ರೋಗಗಳಿಗೆ ಮತ್ತು ಕೀಟಗಳ ಬಾಧೆಗೆ ತುತ್ತಾಗುತ್ತದೆ. ರೋಗಗಳಲ್ಲಿ ಮುಖ್ಯವಾದುವು ಎಲೆ ಮಚ್ಚೆರೋಗ, ತುಕ್ಕುರೋಗ, ಕಾಡಿಗೆ ರೋಗಗಳು. ಕೀಟಗಳಲ್ಲಿ ಮುಖ್ಯವಾದುವು ಸುಳಿನೊಣ, ಕಾಂಡಕೊರಕ ಮತ್ತು ಮಿಡ್ಜ್ ನೊಣ. ಕಣಜದಲ್ಲಿ ಧಾನ್ಯ ಕೊರಕದ ಹಾವಳಿ ಉಂಟು.

	ಎಲೆಮಚ್ಚೆ ರೋಗ : ಎಲೆಗಳ ಮೇಲೆ ಕಂಡುಬರುವ ವಿಶಿಷ್ಟ ಗುರುತುಗಳಿಂದ ಇದನ್ನು ಗುರುತಿಸಬಹುದು. ಈ ಗುರುತುಗಳು ಸಾಮಾನ್ಯವಾಗಿ 12 mm. ಅಗಲ ಹಾಗೂ ಅನೇಕ ಸೆಂಟಿಮೀಟರ್ ಉದ್ದ ಇದ್ದು ಕದಿರಿನಾಕಾರವಾಗಿರುತ್ತದೆ. ಪೈರಿಗೆ 1 ರಿಂದ 1ಳಿ ತಿಂಗಳು ವಯಸ್ಸಾದಾಗ ಇದರ ಹಾವಳಿ ಹೆಚ್ಚು. ತೇವ ಮತ್ತು ಉಷ್ಣದಿಂದ ಕೂಡಿದ ವಾತಾವರಣದಲ್ಲಿ ಇಂದರಿಂದ ಹೆಚ್ಚಿನ ನಷ್ಟ ಉಂಟಾಗುವುದು.

	ತುಕ್ಕು ರೋಗ (ರಸ್ಟ್) : ಎಲೆಗಳ ಮೇಲೆ ನೇರಳೆ, ಕೆಂಪು ಅಥವಾ ಕಂದುಬಣ್ಣದ ಚಿಕ್ಕ ಚುಕ್ಕೆಗಳು ಮೂಡುವುದೇ ಈ ರೋಗದ ಮುಖ್ಯ ಲಕ್ಷಣ. ಬೆಳೆಯ ಎಲ್ಲ ಹಂತಗಳಲ್ಲೂ ಈ ರೋಗ ಕಂಡುಬರುತ್ತದೆ. ಚುಕ್ಕೆಗಳು ಎಲೆಗಳ ಎರಡೂ ಬದಿಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ. ಬರಬರುತ್ತ ಈ ಚುಕ್ಕೆಗಳು ಕಪ್ಪುಬಣ್ಣಕ್ಕೆ ತಿರುಗುತ್ತವೆ. ರೋಗಭಾದೆಗೆ ಈಡಾದ ಎಲೆಗಳು ಬಿಳಿಚಿಕೊಂಡು ಒಣಗಿಹೋಗುತ್ತವೆ.

	ಕಾಡಿಗೆ ರೋಗಗಳು (ಸ್ಮಟ್ಸ್) : ತೆನೆ ಬರುವ ಕಾಲದಲ್ಲಿ ಈ ರೋಗಗಳ ಹಾವಳಿ ಹೆಚ್ಚು. ತೆನೆಯಲ್ಲಿ ಕಾಳಿಗೆ ಬದಲು ಬೂದು ಬಣ್ಣದ ಉದ್ದನೆಯ ಶಂಕುವಿನಾಕಾರದ ಕಾಡಿಗೆಯ ಕೋಶಗಳು ಅಥವಾ ರೂಢಿಯ ತೆನೆಗೆ ಬದಲು ತೆನೆಯೆಲೆಯೊಳಗಿಂದ ಪೊರೆಯಿಂದಾವೃತವಾದ ದೊಡ್ಡ ಕೋಶ ಕಾಣಿಸಿಕೊಳ್ಳುತ್ತವೆ. ಈ ಕೋಶಗಳನ್ನು ಹಿಸುಕಿದರೆ ಕಂದುಬಣ್ಣದ ಅಥವಾ ಕಪ್ಪುಬಣ್ಣದ ಪುಡಿ ಹೊರಬರುವುದು. ಆದರೆ ಕಾಡಿಗೆ ರೋಗಗಳಿಂದ ಹೆಚ್ಚು ನಷ್ಟವಿಲ್ಲ.

	ಸುಳಿ ನೊಣ (ಶೂಟ್ ಫ್ಲೈ) : ಎಳೆಯ ಪೈರಿನಲ್ಲಿ ನೊಣದ ಮರಿ ಕಾಂಡದ ಬುಡದ ತಿರುಳನ್ನು ಕತ್ತರಿಸುವುದರಿಂದ ಸುಳಿ ಸತ್ತು, ಕೊಳೆಯಲು ಪ್ರಾರಂಭವಾಗುತ್ತದೆ. ಮಧ್ಯದ ಸುಳಿ ಸಾಯುವುದರಿಂದ ಪಕ್ಕದಿಂದ ಕವಲುಗಳು ಹೊರಟು ಬೆಳೆ ಹುಲ್ಲಿನಂತೆ ಪೊದೆಪೊದೆಯಾಗಿ ಬೆಳೆಯುತ್ತದೆ. ಸತ್ತ ಸುಳಿಯನ್ನು ಸೀಳಿನೋಡಿದಾಗ ಹಳದಿಮಿಶ್ರಿತ ಬಿಳಿಬಣ್ಣದ ಸಣ್ಣ ಸಣ್ಣ ನೊಣದ ಮರಿಗಳು ಕಂಡುಬರುತ್ತವೆ. ಈ ನೊಣದ ಉಪದ್ರವ ಸಾಮಾನ್ಯವಾಗಿ ತಡವಾಗಿ ಬಿತ್ತನೆಯಾದ ಮುಂಗಾರಿ ಹಾಗೂ ಹಿಂಗಾರಿ ಬೆಳೆಗಳಲ್ಲಿ ಕಂಡುಬರುತ್ತದೆ.

	ಕಾಂಡ ಕೊರಕ (ಸ್ಟಮ್ ಬೋರರ್) : ಇದರ ಲಕ್ಷಣಗಳು ಸುಳಿ ನೊಣದ ಲಕ್ಷಣಗಳಂತೆಯೇ ಇವೆ. ಮೊಳಕೆಯಾದ 25-30 ದಿನಗಳ ಅನಂತರ ಈ ರೋಗಲಕ್ಷಣ ಕಂಡುಬರುತ್ತದೆ. ಎಳೆಪೈರಿನಲ್ಲಿ ಸುಳಿ ಸತ್ತು ಒಣಹುಲ್ಲಿನ ಬಣ್ಣಕ್ಕೆ ತಿರುಗುತ್ತದೆ. ಬೆಳೆದ ಪೈರಿನಲ್ಲಿ ಸುಳಿ ಎಲೆಗಳು ಬಿಳಿಚಿಕೊಂಡಿದ್ದು ಅವುಗಳ ಮೇಲೆಲ್ಲ ರಂಧ್ರಗಳು ಕಾಣುತ್ತವೆ. ಹುಳು ಎಲೆಯ ಹಸಿರನ್ನು ತಿನ್ನುವುದರಿಂದ ಎಲೆಯ ಮೇಲೆ ಬಿಳಿಯ ಬಣ್ಣದ ಮಚ್ಚೆಗಳು ಕಂಡುಬರುತ್ತವೆ. ಕೆಲವು ವೇಳೆ ತೆನೆಯ ಕೆಲವು ಭಾಗಗಳು ಕಾಳುಕಟ್ಟದೆ ಜಳ್ಳಾಗುವುವು.

	ಮಿಡ್ಜ ನೊಣ : ಉಪಕದಿರು ಗೊಂಚಲುಗಳು ಕಾಳು ಕಟ್ಟದೆ ಇರುವುದೇ ಈ ನೊಣದ ಮೊದಲ ಕುರುಹು.

	ಧಾನ್ಯಕೊರಕ : ಇದು ಉದ್ದಮೂತಿಯುಳ್ಳ ಸುಮಾರು 1/8" ಉದ್ದದ ಹುಳು. ಇದರ ಬಣ್ಣ ಕಪ್ಪು. ಒಡೆದ ಕಾಳುಗಳಲ್ಲಾಗಲಿ ಹಿಟ್ಟಿನಲ್ಲಾಗಲಿ ಕಂಡುಬರುವುದಿಲ್ಲ. ದುಂಡನೆಯ ಕಾಳುಗಳನ್ನು ಹಾಳುಮಾಡುತ್ತದೆ. ಕಾಳಿನಲ್ಲಿ ಕಾಣುವ ಸಣ್ಣರಂಧ್ರಗಳಿಂದ ಇದನ್ನು ಪತ್ತೆ ಮಾಡಬಹುದು.

	ಬಿತ್ತನೆಗೆ ಮುಂಚೆ ಹೆಕ್ಟೇರಿಗೆ 40 ಞg 10% ಫ್ಲೋರೇಟ್ ಅಥವಾ 40 ಞg. ಡೈಸಲ್ಪೊಟಾನ್ ಅಥವಾ 20 ಞg 3% ಕಾರ್ಬೊಫ್ಯೂರಾನ್ ಹರಳುಗಳನ್ನು ಹಾಕುವುದರಿಂದ ರೋಗಗಳನ್ನು ನಿಯಂತ್ರಿಸಬಹುದು. ಈ ರಾಸಾಯನಿಕಗಳು ಬೀಜಗಳಿಗೆ ನೇರ ತಗುಲದಂತೆ ಎಚ್ಚರವಹಿಸಬೇಕು. ಬೀಜ ಬಿತ್ತಿದ 25 ಮತ್ತು 45 ದಿನಗಳಲ್ಲಿ 45 mಟ 20 ಎಂಡ್ರಿನ್ ಮತ್ತು 40 g. ಜೇನೆಬ್ ಅನ್ನು 18 ಟ. ನೀರಿನಲ್ಲಿ ಕರಿಗಿಸಿ ಸಿಂಪಡಿಸುವುದರಿಂದ ಕಾಂಡ ಕೊರಯುವ ಹುಳುವನ್ನು ತಡೆಗಟ್ಟಬಹುದು. ಹೆಕ್ಟೇರಿಗೆ 375 ಟ. ದ್ರಾವಣ ಬೇಕಾಗುತ್ತದೆ. ಮಿಡ್ಜ್ ನೊಣ ಮತ್ತು ತೆನೆ ತಿಗಣೆ ಕಂಡುಬಂದರೆ, 115 g. ಕಾರ್ಬರೈಲ್ ಅಥವಾ 36 mಟ. ಮೆಲಾತಿಯನ್ ಅಥವಾ 45 mಟ. ಕಾರ್ಬೋಫೀನೋತೀಮಾನ್ ಮತ್ತು 40 g. ಜೇನೆಬ್ ಅನ್ನು 18 ಟ. ನೀರಿನಲ್ಲಿ ಕರಗಿಸಿ, ಸಿಂಪಡಿಸಬೇಕು. (ಹೆಕ್ಟೇರಿಗೆ 675 ಟ. ದ್ರಾವಣ ಬೇಕು.) ತೆನೆ ಬರುವ ಮೊದಲಮ್ಮೆ, 50% ರಷ್ಟು ತೆನೆ ಬಂದಾಗ ಒಮ್ಮೆ ಮತ್ತು ತೆನೆಯಲ್ಲಿ ಹೂ ಅರಳುವಾಗ ಒಮ್ಮೆ 40 g. ಜೇನೆಬ್ 18 ಟ. ನೀರಿನಲ್ಲಿ ಕರಗಿಸಿ ಸಿಂಪಡಿಸುವುದರಿಂದಲೂ ರೋಗಗಳನ್ನು ಹತೋಟಿಯಲ್ಲಿಡಬಹುದು. ಶೇಖರಿಸಿಟ್ಟ ಧಾನ್ಯದಲ್ಲಿ ತೇವಾಂಶ 8% ಕ್ಕಿಂತ ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಸಂಗ್ರಹಿಸಿದ ಅನಂತರ ಧಾನ್ಯದ ಮೇಲೂ ಚೀಲದ ಹೊರಭಾಗದ ಮೇಲೂ 5% ಮೇಲಾತಿಯಾನ್ ಪುಡಿ ಉದುರಿಸಬೇಕು.

	ಉಪಯೋಗ : ಜೋಳದ ಕಾಳಿನ ಹಿಟ್ಟಿನಿಂದ ತೆಳ್ಳನೆಯ ರೊಟ್ಟಿಗಳನ್ನೂ ಮುದ್ದೆಗಳನ್ನೂ ತಯಾರಿಸುತ್ತಾರೆ. ಜೋಳದ ಹಿಟ್ಟನ್ನು ವಿವಿಧ ಪ್ರಮಾಣಗಳಲ್ಲಿ ಗೋದಿ ಹಿಟ್ಟಿನೊಡನೆ ಬೆರೆಸಿ ಮಿಠಾಯಿಗಳನ್ನು ತಯಾರಿಸುವುದುಂಟು. ಆಫ್ರಿಕದ ಅನೇಕ ಸ್ಥಳಗಳಲ್ಲಿ ಕೆಲವು ತಳಿಗಳ ಕಾಳುಗಳಿಂದ ಸಾರಾಯಿಯನ್ನು ತಯಾರಿಸುತ್ತಾರೆ. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಕಾಳನ್ನು ಸಂಸ್ಕರಿಸಿ, ಅದರಿಂದ ಪಿಷ್ಟ, ಡೆಕ್ಸ್ ಟ್ರೋಸ್ ಸಿರಪ್, ಖಾದ್ಯ ಎಣ್ಣೆ ಮತ್ತು ಬ್ಯೂಟೈಲ್ ಆಲ್ಕೊಹಾಲ್‍ಗಳನ್ನು ತಯಾರಿಸುವರು. ಬೀಜದ ಮೇಲೆ ಇರುವ ಮೇಣದಂಥ ಪದಾರ್ಥದಿಂದ ಪಾದರಕ್ಷೆ ಹಾಗೂ ಮರದ ಸಾಮಾನುಗಳಿಗೆ ಹಾಕುವ ಮೆರಗನ್ನು ಪಡೆಯಬಹುದು. ಗಡುಸಾದ ಹಾಗೂ ದಪ್ಪ ಕವಚದೊಡಗೂಡಿದ ತಳಿಗಳನನು ಅರಳು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇವನ್ನು ಅರಳು ಜೋಳಗಳೆಂದೇ ಕರೆಯುವುದುಂಟು.

	ಜೋಳದ ಕಡ್ಡಿ ದನಗಳಿಗೆ ಒಳ್ಳೆಯ ಮೇವು. ತೆನೆ ಬಿಟ್ಟ ಕೂಡಲೇ ಇನ್ನೂ ಹಸಿರಾಗಿರುವ ಬೆಳೆಯನ್ನು ಕತ್ತರಿಸಿ ನೇರವಾಗಿ ದನಗಳಿಗೆ ತಿನ್ನಿಸುತ್ತಾರೆ. ಕೆಲವು ಸಲ ಎಳೆಯ ಜೋಳದ ಕಡ್ಡಿಗಳನ್ನು ತಿಂದ ಎಳೆಯ ಕರುಗಳು ಬಾಯಿನಿಂದ ನೊರೆಯನ್ನು ಕಕ್ಕುತ್ತ ಸತ್ತು ಹೋಗುತ್ತವೆ. ಇದಕ್ಕೆ ಸೊಕ್ಕುವಿಕೆ ಎಂದು ಹೆಸರು.
	(ಬಿ.ವಿ.ವಿ.; ಕೆ.ಆರ್.ಜಿ.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ